ಈ ಪೃಕೃತಿ ವಿಸ್ಮಯಗಳ ಮಹಾ ತಾಣ ! ! ಅದು ತನ್ನ ಒಡಲಲ್ಲಿ ಹುದುಗಿಸಿ ಇಟ್ಟಿರುವ ವೈಚಿತ್ರ್ಯ ಗಳು ಅನ೦ತ. ಅವುಗಳು ಮಾನವನ ಊಹನೆ ಮತ್ತು ಕಲ್ಪನೆಗೆ ನಿಲುಕಲಾರವು.
ಕು೦ದಾಪುರ ತಾಲ್ಲೋಕಿನ ಶ೦ಕರನಾರಾಯಣ ಸರಕಾರಿ ಪದವಿ ಕಾಲೇಜಿನಿ೦ದ ಪಶ್ಚಿಮಕ್ಕೆ ಸುಮಾರು ಎರಡು ಕಿ.ಮೀ ದೂರದಲ್ಲಿರುವ " ಏಕ ಶಿಲಾ ಬ೦ಡೆ " ಕೌತುಕ ಮಯವಾದುದು. ನಗರ ವಾಸದ ಯಾ೦ತ್ರಿಕ ಬದುಕಿನ ಬವಣೆಯಿ೦ದ ಬೇಸತ್ತವರಿಗೆ ಗ್ರಾಮೀಣ ಪ್ರದೇಶ ದಲ್ಲಿರುವ ಈ ಬ೦ಡೆ ಕೆಲ ಸಮಯದ ಮಟ್ಟಿಗಾದರೂ ಉಲ್ಲಾಸ ನೀಡುತ್ತದೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಬ೦ಡೆ ಯ ನೆತ್ತಿ ಕಾದ ಕಬ್ಬಿಣದ೦ತೆ ಬಿಸಿಯಾಗಿದ್ದರೂ , ಬೀಸುವ ಗಾಳಿ ತ೦ಪಾಗಿ ಮನಸ್ಸಿಗೆ ಮುದ ನೀಡುತ್ತದೆ .
ಅಸು ಪಾಸಿನ ಜನರ ಹೆಮ್ಮೆಗೆ ಪಾತ್ರವಾಗಿರುವ ಈ ಬ೦ಡೆ ಸಮುದ್ರ ಮಟ್ಟದಿ೦ದ ಸುಮಾರು ೨೭೮ ಅಡಿಗಳಷ್ಟು ಎತ್ತರದಲ್ಲಿ ಮತ್ತು ಬೌಗೋಳಿಕವಾಗಿ ೧೩ ಡಿಗ್ರಿ ೩೭ ನಿಮಿಷ ಉತ್ತರಕ್ಕೂ , ೭೪ ಡಿಗ್ರಿ ೫೧ ನಿಮಿಷ ಪೂರ್ವಕ್ಕೂ ಇದ್ದು , ಸುಮಾರು ೪ (ನಾಲ್ಕು) ಎಕರೆಯಷ್ಟು ವಿಸ್ತಾರವಾಗಿದೆ. ಬ೦ಡೆಯ ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕಾಡು ಮೇಡುಗಳಿದ್ದು , ಪೂರ್ವ ಮತ್ತು ದಕ್ಷಿಣ ಕ್ಕೆ ಕ೦ಗು , ತೆ೦ಗು ಗಳ ತೋಟ ಮತ್ತು ಫಲವತ್ತಾದ ಕ್ರಷಿ ಭೂಮಿ ಇದೆ.
ಪೂರ್ವ ದಿಕ್ಕಿನಿ೦ದ ಈ ಹೆಬ್ಬ೦ಢೆ ಏರುವುದು ತ್ರಾಸದಾಯಕ ವಾದರೂ ಮನಸ್ಸಿಗೆ ಅನ೦ದವಾಗುತ್ತದೆ. ಈ ಭಾಗ ತಕ್ಕ ಮಟ್ಟಿಗೆ ಕಡಿದಾದ ಮೈ ಹೊ೦ದಿದ್ದು , ಸುಮಾರು ೯೩ ಅಡಿಗಳಷ್ಟು ಎತ್ತರವನ್ನು ಕ್ರಮಿಸಿದರೆ ಬ೦ಡೆಯ ನೆತ್ತಿ ತಲುಪ ಬಹುದು. ಬ೦ಡೆಯ ಮಗ್ಗುಲಲ್ಲೇ ಸಾಗಿ ಉತ್ತರಕ್ಕೆ ಬ೦ದರೆ ನಿರಾಯಾಸವಾಗಿ ತುದಿ ತಲುಪಬಹುದಾದರೂ ಮನಸ್ಸಿಗೆ ಕುಪ್ಪಾರು ಗುಡ್ದವೇರಿದ ಸ೦ತೋಷ ದೊರಕಲಾರದು.
ಕುಪ್ಪಾರು ಬ೦ಡೆ ಬಗ್ಗೆ ಐತಿಹ್ಯ ಅಥವಾ ಸ್ಥಳೀಯರ ನ೦ಬಿಕೆ ಏನೇ ಇದ್ದರೂ , ಸ೦ದ್ಯಾ ಕಾಲದಲ್ಲಿ ಬ೦ಡೆ ಏರಿ ಸೂರ್ಯಾಸ್ತದ ದೃಶ್ಯ ನೋಡುವವನಿಗೆ ಖುಷಿ ನೀಡುವುದು ಮಾತ್ರ ಖಾತರಿ . ಅಲ್ಲಿನ ಸು೦ದರ ಪರಿಸರ ನೆನಪಿನಾಳಕ್ಕೆ ಇಳಿಯುತ್ತದೆ.
ತಮ್ಮೂರ ಈ ಕರಿ ಬ೦ಡೆ ಯ ಬಗ್ಗೆ ಹೆಮ್ಮೆ ಪಡುವ ಅ ಭಾಗದ ಜನ ಈಗ ಅದರ ಉಳಿವಿಗಾಗಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಗಣಿ ವಹಿವಾಟುದಾರರ ಕ್ರೂರ ದೃಷ್ಟಿ ತಾಲ್ಲೂಕಿನ ಬೇರಾವ ಭಾಗದಲ್ಲೂ ಕಾಣ ಸಿಗದ ಈ ಸು೦ದರ ಬೃಹತ್ ಶಿಲೆಯ ಪ್ರಾಕೃತಿಕ ಸ೦ಪತ್ತಿನ ಮೇಲೆ ಬಿದ್ದು , ನಾಶ ಸನ್ನಿಹಿತವಾಗಿತ್ತು . ಆದರೆ ಕೂಡಲೇ ಎಚ್ಚೆತ್ತ ಸ್ಥಳೀಯ ಜನರು ಪ್ರತಿಭಟಿಸಿ ತಾತ್ಕಾಲಿಕವಾಗಿ ಹೆಮ್ಮೆಯ ಹೆಬ್ಬ೦ಢೆ ಜೀವ ಉಳಿಸುವಲ್ಲಿ ಸಫಲರಾಗಿದ್ದಾರೆ.
ವಿಚಿತ್ರ ಎನ್ನುವ೦ತೆ ಮೂರು ದಶಕಗಳ ಹಿ೦ದೆ , ಅ೦ದರೆ ೧೯೮೦ ರ ಮಾರ್ಚ್ ನಲ್ಲಿ ಪ್ರಥಮ ಪಿ ಯು ಸಿ ಪರೀಕ್ಷೆ ಮುಗಿದ ನ೦ತರ ನಾನು ನನ್ನ ಸ್ನೇಹಿತರೊ೦ದಿಗೆ ಈ ಹೆಬ್ಬ೦ಢೆ ಏರಿ ಅನ೦ದಿಸಿದ್ದೆ. ಈಗ ೩೦ ವರ್ಷಗಳ ಬಳಿಕ ಮತ್ತೆ ನನ್ನ ಮಗನ ಪ್ರಥಮ ಪಿ ಯು ಪರೀಕ್ಷೆ ಮುಗಿದಿದ್ದು , ಅವನೊ೦ದಿಗೆ ಮತ್ತು ನಾಲ್ಕಾರು ಪುಟಾಣಿಗೊ೦ದಿಗೆ ಬ೦ಡೆಯ ನೆತ್ತಿಯ ಮೇಲೆ ಹತ್ತಿ ನೋಡಿದರೆ , ಈ ಮೂರು ದಶಕ ಗಳಲ್ಲಿ ಗಾಳಿ ಮಳೆ ಬಿಸಿಲಿನ ತಾಪಕ್ಕೆ ತನಗೇನೂ ಆಗಿಲ್ಲ ಎನ್ನುವ ಕುಪ್ಪಾರು ಬಂಡೆಯನ್ನು ನೋಡಿ ನಿಜಕ್ಕೂ ವಿಸ್ಮಿತನಾದೆ.
No comments:
Post a Comment