ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹಲವಾರು ಗಗನಚುಂಬಿ ಶಿಖರಗಳಿದ್ದು ಅವುಗಳಲ್ಲಿ ದಕ್ಷಿಣದ ಚಿರಾಪುಂಜಿ ಎನಿಸಿಕೊಂಡಿರುವ "ಆಗುಂಬೆ"ಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ "ಕುಂದಾದ್ರಿ" ಬೆಟ್ಟ ತನ್ನದೇ ಆದ ಪ್ರಕೃತಿ ಸೌಂದರ್ಯದಿಂದ ಪರಿಸರ ಮತ್ತು ನಿಸರ್ಗ ಪ್ರೇಮಿಗಳ ಮನ ಸೆಳೆಯುತ್ತದೆ.
ಆಗುಂಬೆ - ತೀರ್ಥಹಳ್ಳಿ - ಶಿವಮೊಗ್ಗ ಹೆದ್ದಾರಿಯಲ್ಲಿ ಗುಡ್ಡೆಕೇರಿ ಎಂಬಲ್ಲಿ ಪೂರ್ವಕ್ಕೆ ತಿರುಗಿ ಸುಮಾರು 4 ಕಿ.ಮೀ. ಕ್ರಮಿಸಿದರೆ ಕುಂದಾದ್ರಿ ಬೆಟ್ಟದ ತಳ ತಲುಪಬಹುದು. ಅಂಕುಡೊಂಕಾದ ಸುಮಾರು 2 ಕಿ.ಮೀ. ರಸ್ತೆಯಲ್ಲಿ ಬೆಟ್ಟವೇರಿದಾಗ ಮನಸ್ಸಿಗೆ ಮುದ ಸಿಗುತ್ತದೆ. ಕೊನೆಯ ಹಂತದಲ್ಲಿ ಸುಮಾರು 65 ಮೆಟ್ಟಿಲುಗಳು ಏರಿದರೆ ನೀವು ಕುಂದಾದ್ರಿಯ ಶಿಖರ ತಲುಪಬಹುದು. "ಅದೊಂದು ಅವಿಸ್ಮರಣೀಯ ಪ್ರಯಾಣ."
ಕುಂದಾದ್ರಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3129 ಅಡಿ ಎತ್ತರದಲ್ಲಿದೆ. ಬೆಟ್ಟದ ತುದಿಯಲ್ಲಿ ಜೈನ ದೇವಾಲಯವೊಂದಿದ್ದು ಹೊರ ಭಾಗದಲ್ಲಿ ಅಲ್ಲಲ್ಲಿ ಭಗ್ನಗೊಂಡ ಕೆಲ ಮೂರ್ತಿಗಳಿವೆ . ದೇವಳದ ಮುಂಭಾಗದಲ್ಲಿ ಸುಂದರ ಕೆತ್ತನೆಯ ಕಲ್ಲಿನ ಧ್ವಜ ಸ್ತಂಭವಿದ್ದು ಪೂರ್ವದಲ್ಲಿ ನೀರಿನ ಕೊಳವಿದೆ . ವರ್ಷದ ಎಲ್ಲ ಕಾಲಗಳಲ್ಲಿಯೂ ಆ ಕೊಳದಲ್ಲಿ ನೀರಿರುವುದು ವಿಸ್ಮಯಕಾರಿ. ಜೈನ ಸಂಪ್ರದಾಯದ ಉನ್ನತಿಯನ್ನು ಸಾಂಪ್ರತ ಪಡಿಸುವ ಶಿಲಾ ಶಾಸನ ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿದೆ.
ಬೆಟ್ಟದ ಪಶ್ಚಿಮ ಮತ್ತು ಆಗ್ನೇಯ ದಿಕ್ಕಿನಲ್ಲಿ ಕಡಿದಾದ ನೂರಾರು ಅಡಿಗಳ ಪ್ರಪಾತವಿದ್ದು ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಉಳಿದ ದಿಕ್ಕುಗಳಲ್ಲಿ ಬೆಟ್ಟ ಇಳಿಜಾರಾಗಿದ್ದು ಹಸಿರು ಕಾನನದಿಂದ ನಳನಳಿಸುತ್ತಿದೆ. ಬೆಟ್ಟದ ನೆತ್ತಿಯಿಂದ ಸೂರ್ಯಾಸ್ತದ ಸಂತಸ ಪಡೆಯಬಹುದು. ವಿದ್ಯುತ್ ನಿಗಮದ ವಾರಾಹಿ ವಿದ್ಯುತ್ ಯೋಜನೆಗಾಗಿ ನಿರ್ಮಿಸಿದ "ಮಾಣಿ ಜಲಾಶಯ"ವನ್ನು ಇಲ್ಲಿಂದ ವೀಕ್ಷಿಸಬಹುದು.
ಇಷ್ಟೊಂದು ಎತ್ತರದಿಂದ ಸುತ್ತಲಿನ ಹಸಿರಾವೃತ ಕೃಷಿ ಭೂಮಿ ಮತ್ತು ವನಸಿರಿಯ ಸೊಬಗನ್ನು ಕಂಡು ಆನಂದಿಸಬಹುದು. ಬಿಸಿಲಿನ ತಾಪವಿದ್ದರೂ ಕೂಡಾ ತಂಪಾದ ಗಾಳಿ ಪ್ರವಾಸಿಗರಿಗೆ ವಾತಾನುಕೂಲಿ ಅನುಭವ ನೀಡುತ್ತದೆ.
ಕುಂದಾದ್ರಿ ಬೆಟ್ಟ ನೋಡಬಯಸುವ ಪ್ರವಾಸಿಗ ತನ್ನೊಡನೆ ನೀರು ಮತ್ತು ಉಪಹಾರದ ವ್ಯವಸ್ಥೆಯೊಂದಿಗೆ ತೆರಳಬೇಕಾಗುತ್ತದೆ. ಬೆಟ್ಟದ ಆಸುಪಾಸಿನಲ್ಲಿ ಯಾವುದೇ ಉಪಹಾರ ಗೃಹಗಳಿಲ್ಲ. ವಸತಿಗಾಗಿ ತಾತ್ಕಾಲಿಕ ವ್ಯವಸ್ಥೆ ಇದ್ದರೂ ಸುಸಜ್ಜಿತವಾಗಿಲ್ಲ. ಆಗುಂಬೆ - ತೀರ್ಥಹಳ್ಳಿ ಮಾರ್ಗದಲ್ಲಿ ಸರಿಯಾದ ಮಾರ್ಗಸೂಚಿ ಇರುವುದರಿಂದ ಅನಾಯಾಸವಾಗಿ ಈ ಬೆಟ್ಟ ತಲುಪಬಹುದು.
Good one... Keep writing
ReplyDelete